ಅಟ್ಲಾಂಟಿಕ್ ಸನ್ನದು
	
ವಿಶ್ವಸಂಸ್ಥೆಯನ್ನು ಸ್ಥಾಪಿಸಲು ಪ್ರಪಂಚದ ಅನೇಕ ರಾಷ್ಟ್ರಗಳೂ ಅವುಗಳ ನಾಯಕರೂ ನಡೆಸಿದ ಅನೇಕ ಪ್ರಯತ್ನಗಳಲ್ಲಿ ಈ ಸನ್ನದು ಬಹು ಮುಖ್ಯವಾದ ಒಂದು ಮೈಲಿಗಲ್ಲಾಗಿ ಪರಿಗಣಿಸಲಾಗಿದೆ. ಅದು ಈಗಿನ ವಿಶ್ವಸಂಸ್ಥೆಯ ಅಡಿಗಲ್ಲೆಂದೇ ಹೇಳಬಹುದು. ಈ ಸನ್ನದು 1941ನೆಯ ಆಗಸ್ಟ್ 14ನೆಯ ತಾರೀಖು ಪ್ರಪಂಚದ ಎರಡು ಮುಖ್ಯ ರಾಷ್ಟ್ರಗಳಾದ ಅಮೆರಿಕ ಸಂಯುಕ್ತಸಂಸ್ಥಾನಗಳು ಮತ್ತು ಇಂಗ್ಲೆಂಡ್ ದೇಶಗಳಿಂದ ಪ್ರಕಟಿಸಲಾಯಿತು. ಸಂಯುಕ್ತಸಂಸ್ಥಾನಗಳ ಪರವಾಗಿ ಆಗಿನ ಅಧ್ಯಕ್ಷರಾಗಿದ್ದ ಫ್ರಾಂಕ್ಲಿನ್ ರೂಸ್ವೆಲ್ಟರೂ ಇಂಗ್ಲೆಂಡ್ ದೇಶದ ಪರವಾಗಿ ಆಗಿನ ಮಹಾ ಪ್ರಧಾನಿಗಳಾಗಿದ್ದ ವಿನ್‍ಸ್ಟನ್ ಚರ್ಚಿಲರೂ ಉತ್ತರ ಅಟ್ಲಾಂಟಿಕ್‍ನಲ್ಲಿ ಒಂದು ಯುದ್ಧದ ಹಡಗಿನಲ್ಲಿ ಸಂಧಿಸಿ ಒಂದು ತೀರ್ಮಾನಕ್ಕೆ ಬಂದಾದಮೇಲೆ ಅವರಿಬ್ಬರ ಹೆಸರಿನಲ್ಲಿ ಈ ಸನ್ನದನ್ನು ಪ್ರಕಟಿಸಲಾಯಿತು. ಪ್ರಪಂಚದಲ್ಲಿ ಶಾಂತಿಯನ್ನು ಸ್ಥಾಪಿಸುವುದಕ್ಕೂ ವಿಶ್ವದಲ್ಲಿ ಯುದ್ಧಗಳನ್ನು ತಡೆಗಟ್ಟುವುದಕ್ಕೂ ವಿಶ್ವಸಂಸ್ಥೆಯನ್ನು ಸ್ಥಾಪಿಸುವುದಕ್ಕೂ ಮತ್ತು ವಿಶ್ವದ ಭವಿಷ್ಯದ ಏಳಿಗೆಗೂ ಪ್ರಯತ್ನಿಸಬೇಕೆಂದು ಎರಡು ರಾಷ್ಟ್ರಗಳೂ ಈ ಕೆಲವು ತತ್ತ್ವಗಳನ್ನು ಪಾಲಿಸಬೇಕೆಂದೂ ಒಪ್ಪಿಕೊಳ್ಳಲಾಯಿತು. 
	
1. ಎರಡು ರಾಷ್ಟ್ರಗಳೂ ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ತಮ್ಮ ಸ್ವಪ್ರತಿಷ್ಠೆಯಿಂದ ಪ್ರಾದೇಶಿಕ ವಿಸ್ತರಣೆಗೆ ಪ್ರಯತ್ನಿಸಬಾರದು. 

2. ಯಾವುದೇ ಒಂದು ದೇಶದ ಜನಗಳ ಅಭಿಲಾಷೆಗೆ ವಿರುದ್ಧವಾಗಿ ಪ್ರಾದೇಶಿಕ ಬದಲಾವಣೆಗಳಾವುದೂ ಆಗಕೂಡದು. ಅಂಥ ಬದಲಾವಣೆಗಳಿಗೆ ಎರಡು ದೇಶಗಳೂ ಉತ್ತೇಜನ ಕೊಡುವುದಿಲ್ಲ. 

3. ಎಲ್ಲ ರಾಷ್ಟ್ರಗಳ ಜನರೂ ತಮಗೆ ಯಾವ ವಿಧವಾದ ಸರ್ಕಾರ ಬೇಕೊ ಅಂಥದನ್ನು ರಚಿಸಿಕೊಳ್ಳುವುದನ್ನು ಮತ್ತು ಅವರ ಹಕ್ಕುಗಳನ್ನು ಕಾಪಾಡಿಕೊಳ್ಳುವುದನ್ನು ಎರಡು ರಾಷ್ಟ್ರಗಳೂ ಗೌರವಿಸುತ್ತವೆ. 

4. ಎಲ್ಲ ರಾಷ್ಟ್ರಗಳ ವಾಣಿಜ್ಯ ವ್ಯಾಪಾರಗಳ ಮತ್ತು ಆರ್ಥಿಕ ಅಭಿವೃದ್ಧಿಗೂ ಎರಡು ರಾಷ್ಟ್ರಗಳೂ ಪ್ರಯತ್ನಿಸುತ್ತವೆ. 

5. ಎರಡು ರಾಷ್ಟ್ರಗಳು ಎಲ್ಲ ರಾಷ್ಟ್ರಗಳ ಸಾಮಾಜಿಕ ಭದ್ರತೆ, ಆರ್ಥಿಕ ಅಭಿವೃದ್ಧಿ ಮತ್ತು ಜನರ ಜೀವನಮಟ್ಟ ಹೆಚ್ಚಿಸಲು ಶ್ರಮಿಸುತ್ತವೆ. 

6. ವಿಶ್ವದಲ್ಲಿ ಶಾಂತಿಯನ್ನು ಏರ್ಪಡಿಸಿ, ಜನಗಳನ್ನು ಯುದ್ಧಭೀತಿಯಿಂದ ಮತ್ತು ಸಾಮಾನ್ಯ ಕೊರತೆಗಳಿಂದ ಪಾರುಮಾಡಲು ಎರಡು ರಾಷ್ಟ್ರಗಳೂ ಕೆಲಸ ಮಾಡುತ್ತವೆ? 

7. ಸಮುದ್ರಯಾನದ ಹತೋಟಿ ಯಾವ ಒಂದು ರಾಷ್ಟ್ರದ ಹಕ್ಕಲ್ಲ. ಪ್ರಪಂಚದ ಎಲ್ಲ ರಾಷ್ಟ್ರಗಳ ಜನರೂ ವಿಶ್ವದ ಯಾವ ಭಾಗಕ್ಕಾದರೂ ಹೋಗುವಂತೆ ಅವಕಾಶ ಕಲ್ಪಿಸಲು ಎರಡು ರಾಷ್ಟ್ರಗಳೂ ಸಹಾಯಮಾಡುತ್ತವೆ. 

8. ಯುದ್ಧವನ್ನೂ ಆಕ್ರಮಣ ಭೀತಿಯನ್ನುಂಟು ಮಾಡುವುದನ್ನೂ ಸಾರ್ವತ್ರಿಕವಾಗಿ ನಿಷೇಧಿಸುವುದಲ್ಲದೆ ಪ್ರಪಂಚದ ಯಾವ ರಾಷ್ಟ್ರವೂ ಬಲಪ್ರಯೋಗ ಮಾಡದಂತೆ ಎರಡು ರಾಷ್ಟ್ರಗಳೂ ನೋಡಿಕೊಳ್ಳುತ್ತವೆ. 
	
ಈ ಮೇಲಿನ ಎಂಟು ತತ್ತ್ವಗಳು ಅಟ್ಲಾಂಟಿಕ್ ಸನ್ನದಿನಲ್ಲಿ ಸೇರಿವೆ. ಇವು ವಿಶ್ವದಲ್ಲಿ ಶಾಂತಿ ಸ್ಥಾಪಿಸಲು ಬಹು ಮುಖ್ಯವಾಗಿವೆ. ಆದುದರಿಂದ ಅಂತರರಾಷ್ಟ್ರೀಯ ರಾಜಕೀಯ ಕ್ಷೇತ್ರದಲ್ಲಿ ಅಟ್ಲಾಂಟಿಕ್ ಸನ್ನದಿಗೆ ಒಂದು ಮುಖ್ಯವಾದ ಸ್ಥಾನ ಏರ್ಪಟ್ಟಿದೆ.										  
 (ಎಂ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ